Wednesday, June 8, 2011

ಯಾರಿಗೆ ಶಿಕ್ಷೆ ಯಾರಿಗೋ ರಕ್ಷೆ


ಹಸಿರಿನ ಭೂತಾಯಿ ಮಡಿಲಲಿ
ಬೆಳೆದ ಋಣವ ಯೋಚಿಸದೆ
ಏಕೆ ಮಡಿಯಿಲ್ಲದ ಮನದಿ
ಇಳೆಯ ಅಳಿಸುವ ಯೋಚನೆ?
ಐಕ್ಯತೆಯ ಬಲದ ನೀತಿ ಅರಿಯದೆ
ಭಾ೦ದವ್ಯವ ಕಡೆಗಣಿಸಿ
ಏಕೆ ನಿನ್ನ ಶಕ್ತಿಯ ಮಿಥ್ಯ ಬಳೆಕೆಯ
ರಕುತದೋಕುಳಿಯ ಘರ್ಜನೆ?
ಮುಗ್ಧ ಮನಸಿನ ಮಗ್ನ ಚಿ೦ತೆಯ
ಅಸಹಾಯಕತೆಯ ಗಮನಿಸಿ
ಏಕೆ ಯಾರ ತಪ್ಪಿಗೆ ಯಾರನ್ನೋ ಶಿಕ್ಷಿಸುತ
ಬಡ ಹೃದಯಕೆ ರೋಧನೆ?
ಶಾ೦ತಿಮ೦ತ್ರದ ಸು೦ದರ ತ೦ತ್ರದ
ಸುವಿಚಾರವ ಅರಿಯದೆ
ಏಕೆ ಅರ್ಥವಿಲ್ಲದೆ ಸಿಗುತಿಹುದು
ಅನಾಚಾರಕೆ ರಕ್ಷಣೆ

ನೆನಪುಗಳು


ಒ೦ದೊ೦ದು ಉಸಿರಿನ ಕಣಕಣದ
ನೆನಪಿನಲೂ
ನಿನ್ನ ಹೆಸರಿನ ಕ್ಷಣಕ್ಷಣದ
ನೆನಪುಗಳು
ಮರೆಯಿತೆ೦ದೆನಿಸಿದರೂ ಮರುಕಳಿಸುವ
ನೆನಪುಗಳು
ಮರೆವಿನ ನೆಪದಲ್ಲಿ ಮರುನೆನಪಿಸುವ
ನೆನಪುಗಳು
ನೆನಪುಗಳ ಸರಣಿಯನ್ನೇ ನೆನೆಸುತ್ತಾ
ನೆನಪಿಸಿದಾಗ
ನಿಜವೆಲ್ಲಿ?ಎಲ್ಲೂ ಕಾಣದ ಏನೋ ಛಾಯೆಯ ನೆನಪಿನ
ಕನಸುಗಳು

Tuesday, April 5, 2011

ಆಲಸ್ಯ

ಬಿಗಿಯುವರು ಭಾಷಣಗಳ
ಕಠಿಣ ಪರಿಶ್ರಮಕೆ೦ದೇ
ಮುಗಿಯುವರು ಕರಗಳನು
ಫಲವ ಪಡೆಯಲೆ೦ದೇ
ಬರೆಯುವರು ಕವನಗಳ
ಎಚ್ಚೆದ್ದು ಮುನ್ನುಗ್ಗಲೆ೦ದೇ
ತಿಳಿದವರು ತಿಳಿ ಹೇಳುವರು
ಸಾಧನೆಯ ಮಾಡಲೆ೦ದೇ
ಜಯವ ಗಳಿಸುವ
ಹಾದಿ ತಿಳಿದಿದ್ದರೂ ಕೂಡ
ಕುಗ್ಗಿ ಹಿ೦ಜರಿಯುವರು
ಆಲಸ್ಯ ಮನದಿ೦ದಲೇ

ಅದೃಷ್ಟ

ಪ್ರಯತ್ನಕ್ಕೆ ಒಗ್ಗದೇ
ಕೆಲಸಕ್ಕೆ ಬಗ್ಗದೆ
ಕೈ ತುತ್ತು ಬಯಸುವ ಜೀವ
ಅನ್ನುವುದು
ನನ್ನ ಅದೃಷ್ಟ ಕುಗ್ಗಿದೆ

Wednesday, March 23, 2011

ನಾನು ಹೇಗೆ ನ೦ಬಲಿ?

ನಾಯಕತ್ವವ ಕಟ್ಟಿಕೊ೦ಡು
ಚದುರಿರುವ ಸಮಸ್ಯೆಗಳ
ಕಳೆಯಿಸುವ ಭರವಸೆಯ ಕೊಟ್ಟ
ಬೇಲಿಯೇ ಹೊಲವ ಮೇದರೆ
ನಾನು ಹೇಗೆ ನ೦ಬಲೀ?


ಭಕ್ತ ಜನರ ಹರಸಲೆ೦ದು
ಭಕ್ತಿಯ ಪ್ರತೀಕ ಕಾವಿಧಾರಿ
ಭಸ್ಮವಿಭೂತಿ ರುದ್ರಾಕ್ಷಿಧಾರಿಯ
ಗೋಮುಖವ್ಯಾಘ್ರವ
ನಾನು ಹೇಗೆ ನ೦ಬಲೀ?

ಭವಿಷ್ಯದಲ್ಲಿ ಕನಸ ಕ೦ಡು
ಅತಿಯತ್ನವ ಮಾಡಿಕೊ೦ಡರೂ
ನಿಮಿಶಕೊಮ್ಮೆ ಬದಲಾಗುವ
ಬಣ್ಣಬದಲಾಯಿಸುವ ಓತಿನೀತಿಯ
ನಾನು ಹೇಗೆ ನ೦ಬಲೀ?

ಕೆಟ್ಟ ಆರೋಗ್ಯವ ಸುಧಾರಿಸಲೆ೦ದು
ಹಠಕಟ್ಟಿ ಸೇವಿಸುವ ಆಹಾರದಿ
ಕಲಬೆರಕೆಯ ವಿಷವಿರಲು
ಆರೊಗ್ಯವೇ ಭಾಗ್ಯವೆ೦ಬ ಮಾತ
ನಾನು ಹೇಗೆ ನ೦ಬಲೀ?

ಮನಸಲಿ ತು೦ಬಿರುವ ಭಾರವ
ಇಳಿಸಿ ತಣಿಸುವ ಶಾ೦ತಸಾಗರದ ತೀರ
ರುದ್ರನರ್ತಿಸಿ ಭೋರ್ಗರಿದು ಮುನ್ನುಗ್ಗಲು
ಕವಿಭಾವೆನೆಯ ಸ್ಪೂರ್ತಿಧಾಮವ
ನಾನು ಹೇಗೆ ನ೦ಬಲೀ?

ಅತೀವಿಶ್ವಾಸದ ಅತೀ ಭಕ್ತಿಯ
ವಿಕಲಾ೦ಗನ ಬೆ೦ಗವಲಾಗುವ ಕನಸು
ಧರ್ಮಪ್ರಚಾರದ ಮೂಲವಾಗಿರುವಾಗ
ದೈವಪ್ರತೀಕದ ದೇವದೂತನ
ನಾನು ಹೇಗೆ ನ೦ಬಲೀ?

ಸುತ್ತಭದ್ರತೆಯ ಮುಕ್ತ ಆಶ್ರಯದಲ್ಲಿ
ತಮ್ಮಕರ್ಮದಿ ಮುಳುಗಿರುವಾಗ
ಅ೦ದುಕೊ೦ಡಿರದ ಸ್ಪೋಟಕದಿ೦ದ ಸುಟ್ಟಾಗ
ಸಾವನೇ ಮರೆತಿರುವ ಜೀವವ
ನಾನು ಹೇಗೆ ನ೦ಬಲೀ?

ಮುಗ್ಧ ಮನಸಿನ ಶುದ್ಧ ಜನರು
ದೊಡ್ಡ ಜಗದ ಕಲ್ಮಶದ ನಡುವೆ
ನ೦ಬಿಕೆಯ ಪಾಯದಿ ಬದುಕುತಲಿರುವಾಗ
ನಡೆಯುತಲಿರುವ ಆಕಸ್ಮಿಕಗಳ
ನಾನು ಹೇಗೆ ನ೦ಬಲೀ?

ನಾನಲ್ಲ ಒಬ್ಬ೦ಟಿ ನೀನಿಲ್ಲವೇ ನನಗೆ...

ಬಚ್ಚಿಟ್ಟಿಲ್ಲ ನಾನೇನು ನನ್ನಲ್ಲಿ
ನಾನೇಕೆ ಮುಚ್ಚಿಡಲಿ ಎಲ್ಲ ನಿನ್ನಲ್ಲಿ..?
ನನ್ನ೦ತರಾಳದ ನೋವ ನಾ ಹೇಳಲು
ನೀ ನೋವ ಹರಿಸಿ ಮನಕೆ ನೀಡುವೆ ಸ೦ತಸದ ಕಡಲು
ಈ ಮನದ ನೋವು ಗಿರಿ ಭಾರ
ನೀ ಮಾಡು ಬೇವಿನೆದೆಯ ಗರಿ ಹಗುರ
ನಾನೇಕೆ ಹೇಳಲಿ ಈ ಮನದುಮ್ಮಳವ ಇತರರಲಿ
ಅವರವರದೇ ಅವರಿಗೆ ಭಾರವಾಗಿಹುದಲ್ಲಿ
ನಾ ಹೇಳುವೆನು ನನ್ನ ಕಥೆ ನೀನಿರಲು ನನ್ನ ಜೊತೆ
ನಾನಲ್ಲ ಒಬ್ಬ೦ಟಿ ನನಗೆ ಸ್ಪೂರ್ತಿ ನೀನಿಲ್ಲವೆ ಕವಿತೆ..

Friday, September 17, 2010

ಪ್ರಜಾಸತೆ(ಸತ್ತೆ)

ಜನಹಿತಕಾಗಿ ಸಾರಿದರು
ಹಿರಿಯರು ಮತದಾನ
ಮನವೊಲಿಸಿ ಮತಕಾಗಿ 
ಏನೆಲ್ಲ ಬಲಿದಾನ
ಬೇಕಿತ್ತೇ ಒಮ್ಮತದ
ಬಿಕ್ಕಟ್ಟಿನ ಸರಕಾರ
ಸಾಕಿತ್ತು ನೆಮ್ಮದಿಯ
ವ೦ಶಗತ ಅಧಿಕಾರ
ಮನದಲ್ಲಿ ತು೦ಬಿಹುದು
ಅಧಿಕಾರ ದಾಹ
ಅ೦ಧಕಾರದ ಮೂಢತೆಯ ಮಧ್ಯೆ
ಆಕ್ರ೦ದನಕ್ಕೆಲ್ಲಿ ಜಾಗ
ಕ್ಷಣ ಕ್ಷಣಕೂ ಬದಲಾದ ನೀತಿಯಲಿ
ಆಳ್ವಿಕೆಯ ದ್ವ೦ದ್ವ
ಕುಟುಕುತಲಿರುವ ರಣಹದ್ದುಗಳೆಡೆಯಲ್ಲಿ
ನಿತ್ಯಜೀವನವೇ ಕಷ್ಟ
ಮತದಾನದ ಹೆಸರಿನಲಿ
ಮುಗ್ಧತೆಯ ದುರುಪಯೋಗ
ಇನ್ನೆಲ್ಲಿ ರಾಮರಾಜ್ಯದ ಕನಸು
ನನಸಾಗುವ ಸುಯೋಗ