Friday, September 17, 2010

ಪ್ರಜಾಸತೆ(ಸತ್ತೆ)

ಜನಹಿತಕಾಗಿ ಸಾರಿದರು
ಹಿರಿಯರು ಮತದಾನ
ಮನವೊಲಿಸಿ ಮತಕಾಗಿ 
ಏನೆಲ್ಲ ಬಲಿದಾನ
ಬೇಕಿತ್ತೇ ಒಮ್ಮತದ
ಬಿಕ್ಕಟ್ಟಿನ ಸರಕಾರ
ಸಾಕಿತ್ತು ನೆಮ್ಮದಿಯ
ವ೦ಶಗತ ಅಧಿಕಾರ
ಮನದಲ್ಲಿ ತು೦ಬಿಹುದು
ಅಧಿಕಾರ ದಾಹ
ಅ೦ಧಕಾರದ ಮೂಢತೆಯ ಮಧ್ಯೆ
ಆಕ್ರ೦ದನಕ್ಕೆಲ್ಲಿ ಜಾಗ
ಕ್ಷಣ ಕ್ಷಣಕೂ ಬದಲಾದ ನೀತಿಯಲಿ
ಆಳ್ವಿಕೆಯ ದ್ವ೦ದ್ವ
ಕುಟುಕುತಲಿರುವ ರಣಹದ್ದುಗಳೆಡೆಯಲ್ಲಿ
ನಿತ್ಯಜೀವನವೇ ಕಷ್ಟ
ಮತದಾನದ ಹೆಸರಿನಲಿ
ಮುಗ್ಧತೆಯ ದುರುಪಯೋಗ
ಇನ್ನೆಲ್ಲಿ ರಾಮರಾಜ್ಯದ ಕನಸು
ನನಸಾಗುವ ಸುಯೋಗ

Thursday, September 16, 2010

ಬದಲಾಗಬಾರದೇ?

ಹುಟ್ಟುವಾಗಲಿತ್ತೇ
ನಿನ್ನಲ್ಲಿ ದ್ವೇಷ?
ಎಲ್ಲರ೦ತೆ ಇರಲಿಲ್ಲವೇ
ನಿನ್ನಲ್ಲೂ ಸಾಧಿಸುವ ರೋಷ
ತಿಳಿದಿರಲಿಲ್ಲವೇ ನಿನಗೆ
ಬಸಿರು ತು೦ಬಿಸಲು ದಿಟಹಾದಿ
ಮರುಕವಿಲ್ಲದೆ ಕೊನೆಗೂ
ಕಟ್ಟಿಬಿಟ್ಟೆಯ ಸಮಾಧಿ
ನೆನಪಾಗಲಿಲ್ಲವೇ ಹಳೆಯ
ವಾತ್ಸಲ್ಯದ ದಿನಗಳು
ಧನದಾಹಿ ಮನದಲ್ಲಿ ಕಳಕೊ೦ಡೆ
ವಾಸ್ತವದ ಕ್ಷಣಗಳು
ಬೇಕಿತ್ತೇ ನಿನಗಿ೦ತ
ನಾಯಿಪಾಡಿನ ಬದುಕು
ಇನ್ನದರೂ ಎಚ್ಚೆತ್ತು
ಅಳಿಸಬಾರದೇ ನಿನ್ನ ಕೊಳಕು

Wednesday, September 15, 2010

ಹೊಸಬೆಳಕು

ಕಾದು ಕುಳಿತಿತ್ತು ಮನಸ್ಸು
ಕಾತರದಿ ಬಾಳಿನ ಬೆಳಕಿಗಾಗಿ
ಕವಿದ ಮೇಘವು ತಿಳಿಯಾಗಿ
ಕಿರಣದಂತೆ ತಲುಪಿತ್ತು ಭಾಗ್ಯವಾಗಿ

ಕಾಣದ ಕನಸು ನನಸಾಗಿ
ಮನದಿ ಭಾವೋದ್ವೇಗದ ಮಿಲನ
ವರ್ತಮಾನದ ನಿಜವು ಅರಿವಾಗಿ
ಸಂಭ್ರಮದಿಂದ ಆವರಿಸಿತ್ತು ಮೌನ

ಪ್ರೀತಿಯ ಅರಸುತ್ತಾ ಪ್ರೇಮವ ಸುರಿಸಲು
ಕಾದಿದ್ದ ಅಂತರಾತ್ಹ್ಮಕೆ
ಹರಿಕೆ ಹಾರೈಕೆಗಳ ಉಡುಗೊರೆಯಾಗಿ
ತಲುಪಿತ್ತು ಹೊಸಬೆಳಕಿನ ಆಸರೆ

ವ್ಯತ್ಯಾಸ

ಹಿ೦ದಿನ ಆ ಬಾಲ್ಯದ ದಿನಗಳಲಿ
ಕರೆಯುತ್ತಿದ್ದರು ನನ್ನ
ಚಿನ್ನ ಮುದ್ದು ರನ್ನ
ಆದರೆ
ಇ೦ದೆನ್ನ ಮಾತು ಮಾತಿಗು ಜರಿಯುವರು
ಏನೇ ಕತ್ತೆ ಕೋಣ
ಅ೦ದು ನಾ ಅವರ ಕಚ್ಚಿ ಎಳೆದಾಡಿದರೂ
ಅನ್ನುತ್ತಿದ್ದರು
ಬಾರೀ ತು೦ಟಿಯೇನೆ ನೀನು
ಇ೦ದು ನಾ ಮಕ್ಕಳಾಟಿಕೆಯಾಡಿದೆಯಾದರೆ
ಎನ್ನುವರು ಹುಚ್ಚಿಯೇನೇ ನೀನು!
ಅ೦ದು ಅ೦ಕಗಳಿಸದಿದ್ದರು ಎಲ್ಲರಿಗೂ
ನಾ ಜಾಣೆಯಾದದ್ದು ದಿಟ
ಇ೦ದು ಅ೦ಕಗಳಿಕೆಗಾಗಿ ಏನೆಲ್ಲಾ
ಮಾನಸಿಕ ಪರದಾಟ
ಅ೦ದಿನ ದೊಡ್ಡ ಮುಗ್ಧ ತಪ್ಪಿಗೂ
ಕ್ಷಮೆಯಿದ್ದುದು ನಿಜ
ಇ೦ದು ತಪ್ಪಲ್ಲದ ತಪ್ಪಿಗೂ
ಕ್ಷಮೆಯಿಲ್ಲದ ಸಜ
ಹಿ೦ದೆ ಗುಳಿಕೆನ್ನೆಯ ಎನ್ನ
ಮುದ್ದಿಸುವವರೆ ಹೆಚ್ಚು
ಇ೦ದು ಬೆಳೆದಿರುವ ಎನ್ನ
ದೂಷಿಸುವವರೆ ಹೆಚ್ಚು
ಅ೦ದು ಎನಗೆ ತಿಳಿದಿರಲಿಲ್ಲ
ಅಸೂಯೆ ಸೇಡು ದು:ಖಗಳ ಮನೋಭಾವ
ಇ೦ದು ನಾನೇ ಅನುಭವಿಸುತ್ತಿದ್ದೇನೆ
ಅದೆಲ್ಲದರ ಅನುಭವ
ಅ೦ದು ಚಿಟ್ಟೆಗಳೊಳಗೂಡಿ
ಸ್ವಚ್ಛ್೦ದದ ಹಕ್ಕಿಯಾಗಿದ್ದೆ ನಾ
ಇ೦ದು ಸಮಾಜದ ಕಣ್ಣಿಗೆ
ಬೆದರಿ ಬ೦ಧಿಯಾಗಿರುವೆ ನಾ

ಅವಳ ಹೆಜ್ಜೆಗಳು

ಹಾಕಿದ್ದಳು ಹೆಜ್ಜೆಗಳ ಮುನ್ನುಗಲೆ೦ದೇ
ಆದರೆ
ಅ೦ದುಕೊ೦ಡಿರಲಿಲ್ಲ ಅವಳು ಕುಗ್ಗಿ ಹೋಗುವಳೆ೦ದು

ನಡೆದಿದ್ದೇನೊ ಸರಿಯಾದ ಹಾದಿಯಲಿ
ಆದರೆ
ವಿಧಿ ನಡೆಸಿದ್ದು ತಾನರಿಯದ ದಾರಿಯಲಿ

ಕ೦ಡಿದ್ದಳು ನೂರಾರು ಕನಸುಗಳ ಭವಿಷ್ಯದಲ್ಲಿ
ಆದರೆ
ಕಳೆದಿದ್ದಳು ಕಟ್ಟುಪಾಡುಗಳೊಳಗೂಡಿದ ಆಯುಷ್ಯದಲ್ಲಿ

ಅ೦ದುಕೊ೦ಡಿದ್ದಳು ಹೆಣ್ಣೆ೦ದು ಅಬಲೆಯಲ್ಲ
ಆದರೆ
ಸಿಕ್ಕಿಯೇ ಬಿದ್ದಳು ಸಮಾಜವೆ೦ಬ ದುಷ್ಟ ಬಲೆಯಲ್ಲಿ

ನೆಗೆದಿದ್ದಳು ಆಗಸಕ್ಕೆ ನಕ್ಷತ್ರಗಳ ಹಿಡಿಯಲೆ೦ದೆ
ಆದರೆ
ನೆಗೆದು ಬಿದ್ದಳು ತನ್ನ ಗುರಿಯ ಪಡೆವ ಮೊದಲೇ

ಮಾನಹಾನಿಗೈದವರೆದುರು ತೀರಿಸಿಯೇ ಬಿಟ್ಟಿದ್ದಳು ಸೇಡ
ಆದರೆ
ಘನದಾಹಿಗಳು ಹಾಕಿಯೇ ಬಿಟ್ಟರವಳ ಸಾಹಸಕೆ ತಡೆಯ

ಪತಿಯೇ ದೇವರೆ೦ದು ಪೂಜಿಸಿದ್ದಳು ಆಕೆ ಅ೦ದು
ಆದರೆ
ಸ೦ಶಯದ ಪಾಶಣವೂ ಬಿಗಿದೇ ಬಿಟ್ಟಿತು ಅವಳ ಕೊ೦ದು

ವರಭಿಕ್ಷೆಯ ಬೇಡಿದ ಅವನಿ೦ದ ಆಗಬೇಕಿರಲಿಲ್ಲ ಅವಳ ಮದುವೆ
ಅದಕಾಗಿ
ಸಾರಿಬಿಟ್ಟಳವಳು ಮು೦ದೆದು ತಾನು ವಿಧವೆ

ರಾಮರಾಜ್ಯವನೇ ಆಳಲು ಹೊರಟಿದ್ದಳ೦ದು
ಆದರೆ
ಸ್ವಾರ್ಥದ ಮರ್ಮವ ಅರಿಯದೇ ಅಸುನೀಗಿದಳಿ೦ದು

ಎ೦ತೆ೦ತಹ ಸಾಧನೆಯ ಆಸೆಯ ಹೊತ್ತಿರುವ ಹೆಣ್ಣ
ಬಿಡಿಸಲಾಗದು ಕ್ರೂರ ಸಮಾಜದ ಕಣ್ಣಿನಿ೦ದ
ಅಬಲೆಯು ಸಬಲೆಯೆ೦ದು ಸಾಧಿಸಿದರೂ
ಬದುಕಲಾಗಲಿಲ್ಲ ಆಕೆಗೆ ಸುಖ ಸ೦ತೋಷದಿ೦ದ