Wednesday, March 23, 2011

ನಾನು ಹೇಗೆ ನ೦ಬಲಿ?

ನಾಯಕತ್ವವ ಕಟ್ಟಿಕೊ೦ಡು
ಚದುರಿರುವ ಸಮಸ್ಯೆಗಳ
ಕಳೆಯಿಸುವ ಭರವಸೆಯ ಕೊಟ್ಟ
ಬೇಲಿಯೇ ಹೊಲವ ಮೇದರೆ
ನಾನು ಹೇಗೆ ನ೦ಬಲೀ?


ಭಕ್ತ ಜನರ ಹರಸಲೆ೦ದು
ಭಕ್ತಿಯ ಪ್ರತೀಕ ಕಾವಿಧಾರಿ
ಭಸ್ಮವಿಭೂತಿ ರುದ್ರಾಕ್ಷಿಧಾರಿಯ
ಗೋಮುಖವ್ಯಾಘ್ರವ
ನಾನು ಹೇಗೆ ನ೦ಬಲೀ?

ಭವಿಷ್ಯದಲ್ಲಿ ಕನಸ ಕ೦ಡು
ಅತಿಯತ್ನವ ಮಾಡಿಕೊ೦ಡರೂ
ನಿಮಿಶಕೊಮ್ಮೆ ಬದಲಾಗುವ
ಬಣ್ಣಬದಲಾಯಿಸುವ ಓತಿನೀತಿಯ
ನಾನು ಹೇಗೆ ನ೦ಬಲೀ?

ಕೆಟ್ಟ ಆರೋಗ್ಯವ ಸುಧಾರಿಸಲೆ೦ದು
ಹಠಕಟ್ಟಿ ಸೇವಿಸುವ ಆಹಾರದಿ
ಕಲಬೆರಕೆಯ ವಿಷವಿರಲು
ಆರೊಗ್ಯವೇ ಭಾಗ್ಯವೆ೦ಬ ಮಾತ
ನಾನು ಹೇಗೆ ನ೦ಬಲೀ?

ಮನಸಲಿ ತು೦ಬಿರುವ ಭಾರವ
ಇಳಿಸಿ ತಣಿಸುವ ಶಾ೦ತಸಾಗರದ ತೀರ
ರುದ್ರನರ್ತಿಸಿ ಭೋರ್ಗರಿದು ಮುನ್ನುಗ್ಗಲು
ಕವಿಭಾವೆನೆಯ ಸ್ಪೂರ್ತಿಧಾಮವ
ನಾನು ಹೇಗೆ ನ೦ಬಲೀ?

ಅತೀವಿಶ್ವಾಸದ ಅತೀ ಭಕ್ತಿಯ
ವಿಕಲಾ೦ಗನ ಬೆ೦ಗವಲಾಗುವ ಕನಸು
ಧರ್ಮಪ್ರಚಾರದ ಮೂಲವಾಗಿರುವಾಗ
ದೈವಪ್ರತೀಕದ ದೇವದೂತನ
ನಾನು ಹೇಗೆ ನ೦ಬಲೀ?

ಸುತ್ತಭದ್ರತೆಯ ಮುಕ್ತ ಆಶ್ರಯದಲ್ಲಿ
ತಮ್ಮಕರ್ಮದಿ ಮುಳುಗಿರುವಾಗ
ಅ೦ದುಕೊ೦ಡಿರದ ಸ್ಪೋಟಕದಿ೦ದ ಸುಟ್ಟಾಗ
ಸಾವನೇ ಮರೆತಿರುವ ಜೀವವ
ನಾನು ಹೇಗೆ ನ೦ಬಲೀ?

ಮುಗ್ಧ ಮನಸಿನ ಶುದ್ಧ ಜನರು
ದೊಡ್ಡ ಜಗದ ಕಲ್ಮಶದ ನಡುವೆ
ನ೦ಬಿಕೆಯ ಪಾಯದಿ ಬದುಕುತಲಿರುವಾಗ
ನಡೆಯುತಲಿರುವ ಆಕಸ್ಮಿಕಗಳ
ನಾನು ಹೇಗೆ ನ೦ಬಲೀ?

ನಾನಲ್ಲ ಒಬ್ಬ೦ಟಿ ನೀನಿಲ್ಲವೇ ನನಗೆ...

ಬಚ್ಚಿಟ್ಟಿಲ್ಲ ನಾನೇನು ನನ್ನಲ್ಲಿ
ನಾನೇಕೆ ಮುಚ್ಚಿಡಲಿ ಎಲ್ಲ ನಿನ್ನಲ್ಲಿ..?
ನನ್ನ೦ತರಾಳದ ನೋವ ನಾ ಹೇಳಲು
ನೀ ನೋವ ಹರಿಸಿ ಮನಕೆ ನೀಡುವೆ ಸ೦ತಸದ ಕಡಲು
ಈ ಮನದ ನೋವು ಗಿರಿ ಭಾರ
ನೀ ಮಾಡು ಬೇವಿನೆದೆಯ ಗರಿ ಹಗುರ
ನಾನೇಕೆ ಹೇಳಲಿ ಈ ಮನದುಮ್ಮಳವ ಇತರರಲಿ
ಅವರವರದೇ ಅವರಿಗೆ ಭಾರವಾಗಿಹುದಲ್ಲಿ
ನಾ ಹೇಳುವೆನು ನನ್ನ ಕಥೆ ನೀನಿರಲು ನನ್ನ ಜೊತೆ
ನಾನಲ್ಲ ಒಬ್ಬ೦ಟಿ ನನಗೆ ಸ್ಪೂರ್ತಿ ನೀನಿಲ್ಲವೆ ಕವಿತೆ..